ಮಂಚೂರಿಯ
ಚೀನಾದೇಶದ ಈಶಾನ್ಯ ಪ್ರದೇಶ. ಉ. ಅ. 38ಲಿ - 53ಲಿ ಪೂ.ರೇ. 116ಲಿ- 132ಲಿ ಯಲ್ಲಿದೆ. ಹೇಲುಂಗ್ ಜಿಯಾಂಗ್, ಕೀರಿನ್ ಮತ್ತು ಲಿಯಾನಿಂಗ್ ಎಂದು ಈ ಪ್ರದೇಶವನ್ನು ಮೂರು ಪ್ರಾಂತ್ಯಗಳಾಗಿ ವಿಂಗಡಿಸಿದೆ. ಇದನ್ನು ಉತ್ತರ ಮತ್ತು ಪೂರ್ವದಲ್ಲಿ ಸೋವಿಯತ್ ಒಕ್ಕೂಟ ಪ್ರದೇಶ, ದಕ್ಷಿಣದಲ್ಲಿ ಉತ್ತರ ಕೊರಿಯ, ಹಳದಿ ಸಮುದ್ರ ಮತ್ತು ಚೀನಾದ ಪ್ರದೇಶ, ಪಶ್ಚಿಮದಲ್ಲಿ ಮಂಗೋಲಿಯ ಮತ್ತು ಸೋವಿಯತ್ ಪ್ರದೇಶ ಸುತ್ತುವರಿದಿವೆ. ವಿಸ್ತೀರ್ಣ 1,230,000 ಚಕಿಮೀ. ಜನಸಂಖ್ಯೆ 9,088,9449 (1982), ಮಂಚೂರಿಯವನ್ನು ಅದರ ಮೇಲ್ಮೈ ಲಕ್ಷಣಗಳಿಗನುಸಾರವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು. 
ಪೂರ್ವ ಪರ್ವತ ಪ್ರದೇಶ : ಸಿಖೋಬೆ ಆಲಿನ್ ಪರ್ವತ ಶ್ರೇಣಿ ಈ ಪ್ರದೇಶದ ಪಶ್ಚಿಮಕ್ಕೆ ಇದೆ. ಇದರ ಉದ್ದ ಸುಮಾರು 1610 ಕಿಮೀ, ಎತ್ತರ ಸಮುದ್ರ ಮಟ್ಟದಿಂದ ಸುಮಾರು 1523 ಮೀಟರ್. ಇಲ್ಲಿಯ ಶಿಖರಗಳು ವರ್ಷದ ಬಹುಭಾಗ ಹಿಮದಿಂದಾವರಿಸಿರುತ್ತವೆ. ಇದರ ಪಶ್ಚಿಮಕ್ಕೆ ಆಮೂರ್ ನದಿ ಬಯಲು ಇದೆ. 

ಮದ್ಯ ಬಯಲು ಪ್ರದೇಶ: ಏರಿಳಿತಗಳಿಂದ ಕೂಡಿದ ಈ ಪ್ರದೇಶದಲ್ಲಿ ಅಮೂರ್ ನದಿ ಮತ್ತು ಅದರ ಉಪನದಿಯಾದ ಸುಂಗಾರಿ ನದಿ ಹರಿಯುತ್ತವೆ. ಈ ಬಯಲಿನ ಉದ್ದ ಸುಮಾರು 966 ಕಿಮೀ ಅಗಲ, 644 ಕಿಮೀ. ಮೆಕ್ಕಲು ಮಣ್ಣಿನಿಂದ ಕೂಡಿದೆ. ಇದು ವ್ಯವಸಾಯಕ್ಕೆ ಬಲು ಉತ್ತಮ.

ಪಶ್ಚಿಮ ಪರ್ವತ ಪ್ರದೇಶ: ಇಲ್ಲಿಯ ಖಿಂಗಾನ್‍ಷಾ ಪರ್ವತ ಉತ್ತರ ದಕ್ಷಿಣವಾಗಿ ಹಬ್ಬಿದೆ. ದಕ್ಷಿಣಭಾಗ ಚೀನದ ಗೋಡೆಗೆ ತಾಕಿದೆ. ತಪ್ಪಲಿನಲ್ಲಿಯೇ ಆಮೂರ್ ನದಿ ಹುಟ್ಟಿ ಪೂರ್ವದ ಕಡೆಗೆ ಹರಿಯುತ್ತದೆ. ಖಿಂಗಾನ್ ಪರ್ವತ ಮಂಚೂರಿಯಾ ಮತ್ತು ಮಂಗೋಲಿಯಾಗಳನ್ನು ಬೇರ್ಪಡಿಸುತ್ತದೆ. 

ಹವಾಗುಣ: ಈ ಪ್ರದೇಶದ ಉಷ್ಣತೆ ಬೇಸಗೆಯಲ್ಲಿ 20 ಡಿಗ್ರಿ ಸೆ ಮತ್ತು ಚಳಿಗಾಲದಲ್ಲಿ 12.5 ಡಿಗ್ರಿ ಸೆ ಇದ್ದು ಅತ್ಯಂತ ಶೀತವಾಗಿರುತ್ತದೆ. ಜುಲೈ ಮತ್ತು ಆಗಸ್ಟ್ ಅವಧಿಯಲ್ಲಿ ಆಗ್ನೇಯ ಮಾನ್ಸೂನ್ ಗಾಳಿಯಿಂದ ಈ ದೇಶದ ಪೂರ್ವದ ಪ್ರದೇಶಗಳಲ್ಲಿ 1015 ಮಿಮೀ ಮಳೆಯೂ ಮದ್ಯದ ಬಯಲು ಸೀಮೆಗೆ 635 ಮಿಮೀ ಮಳೆಯೂ ಬೀಳುತ್ತದೆ. ಆದರೆ ಪಶ್ಚಿಮ ತಪ್ಪಲು ಪ್ರದೇಶಕ್ಕೆ 380 ಮಿಮೀನಷ್ಟು ಮಳೆಯಾಗುತ್ತದೆ. ಪಶ್ಚಿಮದ ತಪ್ಪಲಿಗೆ ಆಗ್ನೇಯ ಗಾಳಿಗಳು ಬರುವ ವೇಳೆಗೆ ತಮ್ಮ ಆದ್ರ್ರತೆ ಕಳೆದುಕೊಂಡಿರುತ್ತವೆ. ಚಳಿಗಾಲದಲ್ಲಿ ಶೀತ ಮಾರುತಗಳು ಸೈಬೀರಿಯಾದ ಮೇಲೆ ಬೀಸಿ ಬರುವುದರಿಂದ ಮಳೆ ಬೀಳುವುದಿಲ್ಲ. ಅದಕ್ಕೆ ಬದಲು ಹಿಮ ಸುರಿಯುತ್ತದೆ. ಒಟ್ಟಿನಲ್ಲಿ ಇಲ್ಲಿಯ ಹವೆ ವರ್ಷದ ಹೆಚ್ಚು ಕಾಲ ಶೀತವಾಗಿದ್ದು ಪರ್ವತ ಶಿಖಿರಗಳು ವರ್ಷದ ಬಹುಕಾಲ ಹಿಮವೃತ್ತವಾಗಿರುತ್ತವೆ. 

	ಸ್ವಾಭಾವಿಕ ಸಸ್ಯವರ್ಗ : ಪೂರ್ವ ಮತ್ತು ಪಶ್ಚಿಮ ಪರ್ವತ ಪ್ರದೇಶಗಳಲ್ಲಿ ಸೂಚೀಪರ್ಣ ಮಾದರಿಯ ಕಾಡುಗಳಿವೆ. ಇಲ್ಲಿ ಪೈನ್ ಫರ್, ಓಕ್ ಮುಂತಾದ ಬೆಲೆ ಬಾಳುವ ಮರಗಳು ಬೆಳೆಯುತ್ತವೆ. ಇಲ್ಲಿಯ ಮರಗಳನ್ನು ಕಡಿದು ಹಾರ್ಬಿನ್ ನಲ್ಲಿರುವ (ಪಿಂಕಿಯಾಂಗ್) ಗಿರಣಿಗೆ ಸುಂಗಾರಿ ನದಿಯ ಮೂಲಕ ರವಾನಿಸುತ್ತಾರೆ. ಬಯಲು ಪ್ರದೇಶದ ಕೆಲವೆಡೆ ವಿಶಾಲವಾದ ಹುಲ್ಲುಗಾವಲುಗಳಿವೆ. 

	ವ್ಯವಸಾಯ : ಇಲ್ಲಿಯ ಜನರ ಮುಖ್ಯ ವೃತ್ತಿ ವ್ಯವಸಾಯ, ಮಧ್ಯಮ ಬಯಲು ಫಲವತ್ತಾದ ಪ್ರದೇಶ. ಇಲ್ಲಿ ಗೋದಿ, ಬಾರ್ಲಿ, ಓಟ್ಸ್, ಮುಸುಕಿನ ಚೋಳ, ಶುಗರ್ ಬೀಟ್ ಬತ್ತ, ಹೊಗೆಸೊಪ್ಪು, ಕಡಲೆಕಾಯಿ, ಸೆಣಬು ಮತ್ತು ಸೋಯಾಬೀನ್ ಹಾಗೂ ವಿವಿಧ ಧಾನ್ಯಗಳನ್ನು ಬೆಳೆಸುತ್ತಾರೆ. ಯಾಂತ್ರಿಕ ಸಲಕರಣೆಗಳನ್ನು ಬೇಸಾಯಕ್ಕಾಗಿ ಉಪಯೋಗಿಸುತ್ತಾರೆ. ಆದ್ದರಿಂದ ಗೋದಿ ಸೋಯಾಬೀನಿನ ಉತ್ಪಾದನೆ ಇಮ್ಮಡಿಯಾಗಿದೆ. ಸೋಯಾಬೀನನ್ನು ಆಹಾರವಾಗಲ್ಲದೆ ಸಾಬೂನು ಮುಂತಾದ ವಸ್ತುಗಳ ತಯಾರಿಕೆಯಲ್ಲೂ ಉಪಯೊಗಿಸುತ್ತಾರೆ. ಎಣ್ಣೆ ತೆಗೆದ ಬಳಿಕ ಉಳಿಯುವ ಹೊಟ್ಟು ಮತ್ತು ಸಿಪ್ಪೆ ದನಕರುಗಳಿಗೆ ಆಹಾರವಾಗಿ ಬಳಕೆ ಆಗುತ್ತದೆ. ಇಲ್ಲಿ ನೆಲಸಿರುವ ಚೀನಾದ ಒಕ್ಕಲಿಗರಿಗೆ ಸರ್ಕಾರ ಒಳ್ಳೆಯ ಪ್ರೋತ್ಸಾಹ ಕೊಡುತ್ತಿದೆ. ಈಚೆಗೆ ಅರಣ್ಯ ಪ್ರದೇಶವನ್ನು ನಿರ್ಮೂಲ ಮಾಡಿರುವ ಭೂಮಿಯಿಂದ ವ್ಯವಸಾಯದ ಉತ್ಪಾದನೆ ಇವ್ಮ್ಮಡಿಯಾಗಿದೆ. ಒಟ್ಟಿನಲ್ಲಿ ಸುಮಾರು 10,117,000 ಹಕ್ಟೇರ್ ಭೂಮಿಯಲ್ಲಿ ವ್ಯವಸಾಯ ನಡೆಯುತ್ತದೆ. ಮಂಚೂರಿಯಾದಿಂದ ಸೋಯಾಬೀನ್ ಎಣ್ಣೆಯನ್ನು ಜಪಾನಿಗೆ ರಫ್ತು ಮಾಡಲಾಗುತ್ತಿದೆ.

	ಕೈಗಾರಿಕೆ : ಕಲ್ಲಿದ್ದಲು ಮಂಜೂರಿಯಾದ ಪ್ರಮುಖ ಖನಿಜ. ಕಬ್ಬಿಣದ ಅದುರು, ಸಿಲಿಕಾ, ಸುಣ್ಣಕಲ್ಲು ನಿಕ್ಷೇಪಗಳೂ ಇವೆ. ಮಾಲಿಬ್ಡಿನಮ್, ಮ್ಯಾಂಗನೀಸ್, ಪೈರೈಟ್, ತಾಮ್ರ, ಸತುವು ಮತ್ತು ಸೀಸಗಳನ್ನು ತೆಗೆಯುತ್ತಾರೆ. ಇವುಗಳಲ್ಲಿ ಮಾಲಿಬ್ಡಿನಮ್ ಮತ್ತು ಸೀಸ ಮುಖ್ಯ ರಫ್ತುಗಳು.

	1932ಕ್ಕೆ ಮೊದಲು ಸಣ್ಣ ಕೈಗಾರಿಕೆಗಳನ್ನು ಮಾತ್ರ ಹೊಂದಿದ್ದ ಮಂಚೂರಿಯಾ ಇಂದು ಚೀನಾದ ಬೃಹತ್ ಕೈಗಾರಿಕಾ ಪ್ರದೇಶವಾಗಿದೆ. ಕಲ್ಲಿದ್ದಲು ಗಣಿಗಳು, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಕಲ್ಲೆಣ್ಣೆಯ ಗಣಿಗಳು, ಯಂತ್ರಾಯುಧಗಳ ತಯಾರಿಕೆ, ನೌಕಾಂಗಣ, ಬಟ್ಟೆಗಿರಣ್ಣಿಗಳೇ ಮೊದಲಾದ ಕೈಗಾರಿಕೆಗಳು ಇಲ್ಲಿವೆ. ರಾಸಾಯನಿಕ ಕೈಗಾರಿಕೆಗಳು ಲೋಹವಿದ್ಯೆಯ ಕೈಗಾರಿಕೆ, ವಿದ್ಯುಚ್ಛಕ್ತಿ ಸ್ಥಾವರಗಳು ಗೊಬ್ಬರ ಕಾರ್ಖಾನೆಗಳು ಆರಂಭವಾಗಿವೆ. ಎರಡನೆಯ ಮಹಾಯುದ್ಧ ಇಲ್ಲಿ ಪ್ರವರ್ಧಿಸುತ್ತಿದ್ದ ಕೈಗಾರಿಕೆಗಳಿಗೆ ಭಾರಿ ಹೊಡೆತ ಕೊಟ್ಟರೂ ಕ್ರಮೇಣ ಹಳೆಯ ಕೈಗಾರಿಕೆಗಳು ಚೇತರಿಸಿಕೊಳ್ಳತೊಡಗಿದವು. ಹೊಸ ಕೈಗಾರಿಕೆಗಳೂ ಪ್ರಾರಂಭವಾದವು. ಇಂದು ಇಲ್ಲಿಯ ಕಾರ್ಖಾನೆಗಳಲ್ಲಿ ವಿವಿಧ ಯಂತ್ರಗಳು, ರೈಲ್ವೆಸಾರಿಗೆಗೆ ಬೇಕಾದ ಉಪಕರುಣಗಳು ಟ್ರಕ್ಕುಗಳು ಸಿಮೆಂಟ್, ವಿದ್ಯುತ್ ಉಪಕರಣಗಳು ರಾಸಾಯನಿಕಗಳು, ಕಾಗದ ಮುಂತಾದವು ತಯಾರಾಗುತ್ತಿವೆ.

	ಹಾರ್ ಬಿನ್ , ಜಾಂಗ್ ಚುನ್ , ಷೆÀನ್‍ಯಾಂಗ್ ಮತ್ತು ಮುಕ್‍ಡೆನ್ ಇಲ್ಲಿಯ ದೊಡ್ಡ ನಗರಗಳು. ಜೊಹೋಲದಿಂದ ಕಬ್ಬಿಣದ ಅದುರು ಮತ್ತು ಕಲ್ಲಿದ್ದಲನ್ನು ಜಪಾನಿಗೆ ರಫ್ತುಮಾಡಲಾಗುತ್ತಿದೆ. ಡÉೈರೆನ್ ಮುಖ್ಯ ನಗರ, ಪೊರ್ವಏಶಿಯಾದ ಮುಖ್ಯ ಬಂದರು ಹಾಗೂ ರೈಲು ಮತ್ತು ವಿಮಾನಗಳ ಕೇಂದ್ರ. ಪೋರ್ಟ್ ಆರ್ಥರ್ ಮಂಚೂರಿಯಾದ ಇನ್ರ್ನೊಂದು ಮುಖ್ಯ ಬಂದರು.  ಮತ್ತು ಹಡಗು ಪಡೆಯ ಕೇಂದ್ರಸ್ಥಳ. ಮುಕ್ ಡೆನ್ (ಷೆನ್ ಯಾಂಗ್) ಮಂಚೂರಿಯಾ ಪ್ರಾಂತ್ಯದ ಆಡಳಿತ ಕೇಂದ್ರ ನಗರ. ಇಲ್ಲಿ ಅನೇಕ ಕಾರ್ಖಾನೆಗಳಿವೆ. ಇದೊಂದು ವ್ಯಾಪಾರಕೇಂದ್ರ ಮಂಚೂರಿಯಾದಲ್ಲಿ 12,880 ಕಿ.ಮೀ ಗಳೀಗೂ ಹೆಚ್ಚು ರೈಲು ಮಾರ್ಗವಿದೆ. ದೊಡ್ಡನಗರಗಳನ್ನು ಕೂಡಿಸುವ ಹೆದ್ದಾರಿಯಿದೆ. ವಿಮಾನ ಸಂಪರ್ಕವಿದೆ.

	ಇತಿಹಾಸ : ಮಂಚೂ ಜನಾಂಗದ ಸೈನಿಕರು ಆಗಾಗ ಚೀನದಮೇಲೆ ಧಾಳಿ ಮಾಡುತ್ತಿದ್ದು 1644ರಲ್ಲಿ ಉತ್ತರ ಚೀನದ ಭಾಗವನ್ನು ಆಕ್ರಮಿಸಿಕೊಂಡರು.	ಮುಂದೆ ತಮ್ಮ ಅಧಿಕಾರವನ್ನು ಇಡೀ ಚೀನದಮೇಲೆ ಸ್ಥಾಪಿಸಿದರು. 1912ರ ತನಕವೂ ಮಂಚೂಗಳು ರಾಜ್ಯವಾಳಿದರು. 

	ರಷ್ಯ 1800ರ ಸುಮಾರಿಗೆ ತನ್ನ ಪ್ರದೇಶÀವನ್ನು ವಿಸ್ತಾರಗೊಳಿಸುತ್ತ ಚೀನದ ಭೂಭಾಗವನ್ನು ಆಕ್ರಮಿಸಿತು. 1860ರಲ್ಲಿ ಆದ ರಷ್ಯ ಚೀನ ಒಪ್ಪಂದದಂತೆ ಚೀನ ರಷ್ಯಕ್ಕೆ ಆಮೂರ್ ನದಿಯ ಉತ್ತರಭಾಗವನ್ನು ಉಸುರೀನದಿಯ ಪೂರ್ವ ಭಾಗವನ್ನು ಬಿಟ್ಟುಕೊಟ್ಟಿತು. 1896ರಲ್ಲಿ ಚೀನ ರಷ್ಯಕ್ಕೆ ಮಂಚೂರಿಯಾ ಮಾರ್ಗವಾಗಿ ರಷ್ಯದ ಬಂದರಾದ ವ್ಲಾಡಿವೋಸ್ಟಾಕ್‍ಗೆ ರೈಲು ದಾರಿ ನಿರ್ಮಿಸಲು ಅನುಮತಿ ನೀಡಿತು. ಎರಡು ವರ್ಷದ ಬಳಿಕ ರಷ್ಯ ಲಿಯೇಡುನ್ ಪರ್ಯಾಯ ದ್ವೀಪದಲ್ಲಿ ಡೈರನ್ ಮತ್ತು ಆರ್ಥರ್ ಎಂಬಲ್ಲಿ ಬಂದರುಗಳನ್ನು ನಿರ್ಮಿಸಿತು. ಜಪಾನ್-ರಷ್ಯಾಯುದ್ಧದಲ್ಲಿ (1904-05) ಜಪಾನ್ ರಷ್ಯಾವನ್ನು ಸೋಲಿಸಿ ಲಿಯೇಡುನ್ ಪರ್ಯಾಯದ್ವೀಪವನ್ನು ಆಕ್ರಮಿಸಿಕೊಂಡಿತು. 1931ರಲ್ಲಿ ಜಪಾನ್ ಮಂಚೂರಿಯಾವನ್ನು ತನ್ನ ವಶಪಡಿಸಿಕೊಂಡು ಮಂಚುಕೊ ಎಂದು ಹೆಸರಿಸಿತು. ಎರಡನೆಯ ಮಹಾಯುದ್ಧದಲ್ಲಿ (1939-45) ಮಂಚೂರಿಯಾ ಜಪಾನಿನ ಪ್ರಮುಖ ಕೈಗಾರಿಕಾ ಕೇಂದ್ರವಾಗಿತ್ತು. ಆದರೆ ಆದಯುದ್ಧದ ಅಂತ್ಯದ ವೇಳೆಗೆ ರಷ್ಯ ಜಪಾನಿನ ಮೇಲೆ ಯುದ್ಧ ಘೋಷಿಸಿ ಮಂಚೂರಿಯಾವನ್ನು ಗೆದ್ದುಕೊಂಡಿತು. ಚೀನಾಕ್ಕೆ ರಷ್ಯಾ 1946ರಲ್ಲಿ ಮಂಚೂರಿಯಾವನ್ನು ಹಿಂತಿರುಗಿಸಿದ್ದಲ್ಲದೆ ಕಮ್ಯುನಿಸ್ಟರಿಗೆ ಸಹಾಯ ನೀಡಿ ಚೀನದಲ್ಲಿ ಅವರು ಅಧಿಕಾರಕ್ಕೆ ಬರುವಂತೆ ಮಾಡಿತು. 1949ರಲ್ಲಿ ಇಡೀ ಚೀನಾದೇಶ ಕಮ್ಯುನಿಸ್ಟರ ಆಡಳಿತಕ್ಕೆ ಒಳಗಾಯಿತು.  
									
(ಟಿ.ಎ.ಟಿ. ; ಕೆ.ವಿ.ಎಸ್‍ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ